Sunday, December 14, 2014

ಬೀದಿಗೊಂದು ನಾಯಿರಲಿ, ಮನೆಗೊಂದೇ ಮಗುವಿರಲಿ....!!

ಹೀಗೆ ಮನೆಗಳ ಮುಂದಿರುವ, 'ನಾಯಿಗಳಿವೆ ಎಚ್ಚರಿಕೆ' ಅನ್ನುವ ಬೋರ್ಡುಗಳು ಹಾಸ್ಯಾಸ್ಪದವಾಗಿ ತೋರುತ್ತಿದೆ. ಬಹುಷಃ ಕಾಡುಗಳಲ್ಲೂ 'ಸಿಂಹಗಳಿವೆ ಎಚ್ಚರಿಕೆ..' ಅಥವಾ ' ಹುಲಿಗಳಿವೆ ಎಚ್ಚರಿಕೆ' ಎಂಬ ಬೋರ್ಡುಗಳು ಕಾಣಲಾರಿರೆನೋ. ಅಥವಾ ಸಿಂಹಗಳು ಕಾಡುಗಳಲ್ಲಿ ಕಾಣಸಿಗುತ್ತದೋ-ಇಲ್ಲವೋ ಅದು ಬೇರೆಯೇ ತೆರನಾದ ಪ್ರೆಶ್ನೆ. ಕೆಲವೊಂದು ಸ್ಥಳಗಳಲ್ಲಿ, 'ಕೋತಿಗಳಿವೆ ಎಚ್ಚರಿಕೆ' ಎಂಬ ಬೋರ್ಡುಗಳನ್ನು ಲಗತ್ತಿಸಿರುವುದನ್ನು ನೋಡಿದ್ದೇನೆ. ಅಸಲಿಗೆ ಮನೆಯಲ್ಲಿ ಮನುಷ್ಯರಿದ್ದಾರೋ ಇಲ್ಲವೋ ಎಂಬ ಸಂದೇಹ ಉಳಿದು ಬಿಡಬಹುದು. ಬೋರ್ಡನ್ನು ನೋಡಿ ಭೀತಿಯಿಂದ ಮನೆಯಲ್ಲಿರುವವರ ಹೆಸರನ್ನು ಗೇಟಿನಿಂದಾಚೆಯೇ ನಿಂತು ಕೂಗಿದರೆ, ನಾಯಿಯಷ್ಟೇ ಬೊಗಳಬಹುದು. ಆದರೂ ನಾವು 'ನಾಯಿ ಬೊಗಳಿದರೆ ದೇವ ಲೋಕ ಹಾಳಾಗದು' ಎಂದು ಕಣ್ನ್ ಮುಚ್ಚಿ ಒಳ ನಡೆಯುವಂತಿಲ್ಲ, ಅವುಗಳ ಬೊಗಳುವಿಕೆಯನ್ನು ಅಲಕ್ಷಿಸುವಂತಿಲ್ಲ. ನಾಯಿ, ಟಾಮಿಯೋ, ಜಿಮ್ಮಿಯೋ ಆಗಿದ್ದರೆ ಪರವಾಗಿಲ್ಲ. ನಾಯಿಯ ಹೆಸರೇ ಟೈಗರ್ ಎಂಬುದಾಗಿದ್ದರೆ ನಾವು ತುಂಬಾ ಜಾಗರೂಕರಾಗಿರಬೇಕು.
ಹಾಗೆ ನೋಡಿದರೆ, ಈ 'ನಾಯಿಯಿದೆ ಎಚ್ಚರಿಕೆ' ಅಥವಾ ಶ್ರೀಮಂತರ ಮನೆಯಾಗಿದ್ದರೆ, 'ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡು ಗಳಲ್ಲಿ ಸಂಪೂರ್ಣ ಮಾಹಿತಿಗಳೇ ಇರುವುದಿಲ್ಲ. ಮನೆಯ ಒಳಗಿರುವ ನಾಯಿ, ಗಂಡು ನಾಯಿಯೋ ಅಥವಾ ಹೆಣ್ಣು ನಾಯಿಯೋ, ಇಲ್ಲವೇ ಬೊಗಳುವ ನಾಯಿಯೋ ಅಥವಾ ಕಚ್ಚುವ ನಾಯಿಯೋ ಎಂಬ ಯಾವುದೇ ಮಾಹಿತಿಗಳು ಲಭ್ಯವಿರುವುದಿಲ್ಲ. ಇಲ್ಲವಾದಲ್ಲಿ at least ಆ ನಾಯಿಯ ಹೆಸರಾದರೂ ಆ ಬೋರ್ಡಿನೊಂದಿಗೆ ಮಾಹಿತಿಯಿದ್ದರೆ ಸೂಕ್ತ. ಏಕೆಂದರೆ ಯಾರಾದರೂ ಮನೆಗೆ ಬಂದರೆ, ಮೊದಲು ಆ ನಾಯಿಯ ಹೆಸರನ್ನೇ ಕೂಗಿ ಕರೆದು ನಮ್ಮ ಪರಿಚಯವನ್ನಾದರೂ ವಿನಿಮಯ ಮಾಡಿಕೊಳ್ಳಬಹುದು. ಹೇಗಿದ್ದರೂ Dog is Man's best friend ಅಲ್ಲವ? ಅತಿಥಿಗಳು ಮನೆಗೆ ಬರುವಾಗ ಮನೆಯವರಿಗೆಂದು ತರುವ ತಿಂಡಿ ಪದಾರ್ಥಗಳೊಡನೆ ನಾಯಿಗೆಂದೇ ಪ್ರತ್ಯೇಕವಾದ ನಾಯಿಯ ಬಿಸ್ಕಟ್ಟುಗಳನ್ನು ಸಹ ತರಲು ಅನುಕೂಲವಾಗಬಹುದು.
ಇತ್ತೀಚಿಗೆ ಪರಿಚಿತರೊಬ್ಬರ ಮನೆಗೆ ಹೋಗಿದ್ದಾಗ, ಅವರ ಮನೆಯಲಿದ್ದ ನಾಯಿಯನ್ನು ನೋಡಿ, ' ಏನ್ ಹಾಕ್ತೀರಾ ನಿಮ್ಮ ಮನೆ ನಾಯಿಗೆ, ಗುಂಡು ಗುಂಡಾಗಿದೆ..' ಎಂದೆ. ಅದಕ್ಕವರು, ' ನೀವು ಅದನ್ನ "ನಾಯಿ" ಅನ್ನ್ಬೇಡಿ, ಅದ್ರ ಹೆಸರು "ಜಿಮ್ಮಿ" ಎಂದರು! ಅದೇನು ಅವರ ವಿವರಣೆಯೂ, ವಿಶ್ಲೇಷಣೆಯೋ ತಿಳಿಯಲಿಲ್ಲ. ಈಗೆಲ್ಲ, 'ಹಚಾ..ನಾಯಿ..' ಎನ್ನುವಂತಿಲ್ಲ. ಆದ ಕಾರಣವೋ ಏನೋ, ಆ ಕಂಪನಿಯ ಹೆಸರೇ 'ಹಚ್ಹ್ಹ್' ಎಂದಾಗಿ ಬಿಟ್ಟಿತು. ಈಗೀಗ ನಾಯಿಗೆಂದು ಪ್ರತೆಯೇಕವಾದ ಹೇರ್ ಸ್ಟೈಲ್ ಗಳು ಬಂದಿರುವುದರಿಂದ, ನಾಯಿಗಳಿಗೆಂದೇ ಹೇರ್ ಸ್ಪಾ ಗಳು ಬಂದರೆ ನಾಯಿಗಳೆಲ್ಲಾ ಸಾಲುಗಟ್ಟಿ ನಿಂತೀತು! ಇತ್ತೀಚಿಗೆ ಗೆಳತಿಯೊಡನೆ ಮಾತನಾಡುತ್ತಾ ನನ್ನ ಮಾತಿಗಿಂತ ಎದುರು ಮನೆಯ ನಾಯಿ ಬೊಗಳಿದ್ದೆ ಹೆಚ್ಚು ಕೇಳಿಸಿ, "ಮೊದ್ಲು ಆ ನಾಯಿಯನ್ನು ಓಡಿಸಿ ನಂತರ ಫೋನ್ ಮಾಡು..." ಎಂದದ್ದು ಮಾತ್ರ ಯಾವ 'ನಾಯ' [ ಅನ್ಯಾಯ!]
ಆದರೂ ಬೀದಿಗೊಂದಾದರೂ ನಾಯಿರಬೇಕು. ಇಲ್ಲವಾದಲ್ಲಿ ಮನೆಯ ತಂಗಳ ವಿಲೇವಾರಿಗೆ ತಲೆನೋವಾಗಬಹುದು, ಮನೆಯ ಕಾರಿನ ಟೈರುಗಳಿಗೆ ಜಲಾಭಿಷೇಕ ಆಗದೆ ಬೇಸರಿಸಿಕೊಳ್ಳಬಹುದು. ಬೆಂಗಳೂರಿನಂತ ಬೆಂಗಳೂರಿನಲ್ಲಿ ಮನೆಗೆ ಮನೆಗಳೇ ಆಫೀಸಿನಲ್ಲಿ ಕೂತಿರುವಾಗ ಬೀದಿಗೆ ಒಂಟಿತನ ಕಾಡಬಾರದಂತೆ ನೋಡಿಕೊಳ್ಳುವುದೇ ನಾಯಿಗಳು. ನನ್ನಂತ ಯುವ ಪ್ರೇಮಿಯೊಬ್ಬ ಕೈ ಕೈ ಹಿಡಿದು ನಡೆವಾಗ ದೂರದಲೆಲ್ಲೋ ನಾಯಿ ಬೊಗಳಿದರೆ ಇವಳು ಇನ್ನಷ್ಟು ಅಪ್ಪಿ ನಡೆಯುವ ಸಣ್ಣ ಖುಷಿಗಾದರೂ ಬೀದಿಗೊಂದು ನಾಯಿರಲಿ, ಮನೆಗೊಂದೇ ಮಗುವಿರಲಿ....!!

Sunday, May 20, 2012

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ!!

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ. ಹತ್ತಿರ ಇದ್ದರೆ ಒಂದು ರೀತಿಯ ಉಡಾಫೆ, ದೂರ ಇದ್ದರೆ ಮರೆತೇ ಬಿಡುವ ಸಾಧ್ಯತೆ. Out of sight is out of mind ಎನ್ನುತ್ತಾರಲ್ಲ ಹಾಗಾಗಿಬಿಡಬಹುದು. ಈ ನಡುವೆ ವ್ಯಕ್ತಿಗಳ ಮಧ್ಯೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದಕ್ಕೆ ಭೌತಶಾಸ್ತ್ರದಲ್ಲಿ ಏನಾದರೂ ಸೂತ್ರಗಳಿವೆಯ ಎಂದು ಹುಡುಕತೊಡಗಿದ್ದೇನೆ. ಹಾಗೇನಾದರೂ ಇದ್ದರೆ ಅದು 'ನ್ಯೂ'-ಟನ್ನೋ - ಓಲ್ಡ್-ಟನ್ನೋ ಎಂಬ ಪುರಾತನ ವಿಜ್ನ್ಯಾನಿ ಒಬ್ಬನಿದ್ದನಲ್ಲ, ಆತನ ಗಮನಕ್ಕೆ ಬಂದಿರಬೇಕಿತ್ತು! ಇದು ಗಮನಾರ್ಹ ಹಾಗು ಗಹನಾರ್ಹ ! ಕೆಲವೊಮ್ಮೆ ದೂರವಿದ್ದರೆ ಒಳಿತೆನ್ನಿಸ ಬಿಡುತ್ತದೆ, ಏಕೆಂದರೆ ದೂರವಿರುವವರ ದೂರುಗಳು ಕೇಳುವುದಿಲ್ಲವಲ್ಲ! ಈಗೆಲ್ಲ ದೂರವಾಣಿ, ದೂರೋ-ವಾಣಿಗಳು ಬಂದುಬಿಟ್ಟಿವೆ. ನಾವು-ನೀವು ಎಲ್ಲರೂ ಸಮಾನವಾಗಿ ಹೆಲ್ಪ್ ಲೆಸ್ಸು ! ಹೀಗೆ ಇತ್ತೀಚಿಗೆ ಗೆಳೆಯನೊಬ್ಬ ದೂರದೂರಿನಿಂದ ನಮ್ಮ ಮನೆಯ ಆಸುಪಾಸಿನಲ್ಲೇ ಮನೆ ಮಾಡಿದ. ಹೋಗಲಿ ಆಜು ಬಾಜಿನಲ್ಲೇ ಸಿಗುತ್ತಾನಲ್ಲ ಎಂದುಕೊಂಡರೆ, ವಾರಕ್ಕಿರಲಿ- ತಿಂಗಳುಗಟ್ಟಲೆ ಪತ್ತೆಯೇ ಇಲ್ಲ ಆಸಾಮಿ. ವಾರಕ್ಕೊಮ್ಮೆಯಾದರೂ ಫೋನು ಮಾಡುತ್ತಿದ್ದವನಿಗೆ, ಹತ್ತಿರ ಮನೆ ಇದ್ದೂ ಸಿಗಲಾಗದಷ್ಟು ಯಾವ ಕಾಡು ಕಡಿಯುವಷ್ಟು ಕೆಲಸ ಬಿದ್ದಿದೆ ಎಂದು ಮನೆ ಹೊಕ್ಕರೆ, ನಾಲ್ಕು ದಿಕ್ಕುಗಳಿಗೂ ಕೈ-ಕಾಲು ಚಾಚಿಕೊಂಡು ಮಲಗಿಕೊಂಡಿರುವುದ..? ಅಕಟಕಟಾ ಎಂದುಕೊಂಡು ಕಾರಣ ಕೇಳಿದರೆ, ಇಲ್ಲೇ ಸಿಗ್ತೀಯಲ್ಲ ಎಂದು ಸುಮ್ಮನಿದ್ದೆ ಅನ್ನುವುದ..?




ದೂರವಿದ್ದಾಗ ಹತ್ತಿರ ಬಾ ಎನ್ನಬಹುದು, ಆದರೆ ಹತ್ತಿರವಿದ್ದಾಗ ದೂರ ಹೋಗು ಅನ್ನುವುದು ಅನುಚಿತ. ಗೆಳತಿ ದೂರದಲ್ಲಿ ಇದ್ದಾಗ ," ಹತ್ತಿರ ಹತ್ತಿರ ಬಾ.." ಎಂದು ಹಾಡಬಹುದು. ದೂರ ಹೋಗು ಎಂದು ನಿರಾಕರಿಸಲು ಯಾವ ಹಾಡೂ ಇರಲಾರದು. ಇದ್ದರೆ ಆ ಹಾಡಿಗೆ ಯಾವ ಗಮ್ಮತ್ತೂ ಸಲ್ಲದು ಹಾಗು ಸಲ್ಲಕೂಡದು! ಆದರೂ ಯಾರು ತಾನೇ ಗೆಳತಿಯನ್ನು ದೂರ ಹೋಗು ಎಂದಾರು? ಆ ಮಟ್ಟಿನ ನಿರ್ದಾಕ್ಷಿಣ್ಯತೆ ಯಾವ ಗಂಡು ಮಕ್ಕಳಲೂ ಕಾಣೆ! ದೂರ ಹೋದಮೇಲೆ ಹಲುಬುವುದು, ವಿರಹ ಗೀತೆ ಹಾಡುವುದು ಇದ್ದೆ ಇದೇ! ಹೆಂಡತಿಯಂತಹ ಜೀವಿ ಹತ್ತಿರವಿದ್ದರೆ ಕೋಟಿ ರೂಪಾಯಿ ಮೌಲ್ಯ ಬಾಳಬಹುದು. ತವರು ಮನೆಗೆ ಹೋಗಿ ದೂರವಾದಾಗ, ದೂರ ಭಾರವೆನಿಸಿದರೂ, ದುಬಾರಿಯೆನಿಸಿದರೂ ಅದರ ನಿಖರವಾದ ಮೌಲ್ಯ ಇನ್ನೂ ಎಂಥಹ ಗಂಡು ಪ್ರಾಣಿಗೂ ತಿಳಿದ ಹಾಗಿಲ್ಲ. ಆದರೂ ಹತ್ತಿರ ಇದ್ದೂ ಸಹ ಇನ್ನೂ 'ರಾ..ರಾ..' ಎನ್ನುವ ಪ್ರೇಮಿಗಳ ಕಂಡು ಇನ್ನೆಲಿಗೆ ಬರಬೇಕೋ ಎಂದು ಬೆರಗು ಬೆರಗು, ನಿಬ್ಬೆರಗು! ಆದರೂ ಈ ದೂರ-ಹಾಗು ಹತ್ತಿರ ಇದೊಂದು ರೀತಿಯ ವಿಸ್ಮಯವೇ ಸರಿ. ದೂರ ಹಾಗು ಹತ್ತಿರ ಕೆಲವೊಮ್ಮೆ ಮನಸ್ಥಿತಿಗಳ ಮೇಲೆ ಅವಲಂಬಿತ. ಬೆಂಗಳೂರಿನಂತಹ ಜನನಿಬಿಡ ಊರಿನಲ್ಲಿ ದೂರ ಹಾಗು ಹತ್ತಿರವನ್ನು ಸ್ಪಷ್ಟವಾಗಿ define ಮಾಡುವುದು ಕಷ್ಟಸಾಧ್ಯ. ಕೆಲವೊಮ್ಮೆ ಪಕ್ಕದ ಬೀದಿಗೆ ಹೋಗುವುದು ಸಹ ದೂರವೆನಿಸಬಿಡಬಹುದು, ದುಸ್ಸಾಧ್ಯವಾಗಬಹುದು. ಹತ್ತಿರವಿದ್ದೂ ಸಹ ದೂರವಾದ ಮನಸ್ಸುಗಳು ಒಂದು ಕಹಿ ಉದಾಹರಣೆ ಮಾತ್ರ. ದೂರದಲ್ಲೇ ಏನೋ ಹಿತವಿದೆ ಎಂದು ಊಹಿಸುತ್ತ, ಊಹೆಯ ಸುತ್ತಾ ಸುತ್ತುತ್ತಾ ಇರುವುದು ಒಳಿತು.



ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರೆ. ಹತ್ತಿರ ಇರುವ ಬೆಟ್ಟದ ಬಗ್ಗೆ ಯಾವ ಗಾದೆಯೂ ಇಲ್ಲ, ತಗಾದೆಯೂ ಇಲ್ಲ. ಹತ್ತಿರದ ಹಾಗು ಯಾರೂ ಹತ್ತಿರದ ಬೆಟ್ಟವೆ ಸೇಫು, ಹತ್ತದಿದ್ದವರಿಗೆ ರಿಲೀಫು. ದೂರದ ಬೆಟ್ಟ ಯಾಕೆ ನುಣ್ಣಗೆ ಎನ್ನುವುದು ಅದು ದೂರ ಇರುವ ಕಾರಣವೋ, ಅಥವಾ ದೃಷ್ಟಿಯ ನೆವವೋ? ಅಥವಾ ಬೆಟ್ಟಕ್ಕೆ ತಗುಲಿರುವ ಅಪವಾದವೋ! ಆಟೋ ಹಾಗು ಲಾರಿಗಳ ಹಿಂಬದಿಯಲ್ಲಿರುವ 'ನಡುವೆ ಅಂತರವಿರಲಿ' ಎಂಬುದು ನಾವು ಎಷ್ಟು ದೂರ ಇರಬೇಕು ಎಂದು ಸೂಚಿಸುತ್ತದೋ, ಅಥವಾ ಎಷ್ಟು ಅಂತರ ಇಡಬೇಕು ಎಂದು ಹೇಳುತ್ತದೋ ಸ್ಪಷ್ಟವಿಲ್ಲ. ದೂರವಿದ್ದರೆ ಅದಕ್ಕೊಂದು ಅಳತೆ, ಗೋಲು[Goal] ಹಾಗು ಅಳತೆಗೋಲು ಎಲ್ಲವೂ ಇರುತ್ತದೆ. ಹತ್ತಿರವಿರುವುದು ಕೊಂಚ Subjective! ಅದರೆಡೆ ಯಾವಾಗಲೂ ನಿರಾಕರಣೆ ಇದ್ದೆ ಇರುತ್ತದೆ. ಆದರೂ ಈ ಅಹಮ್ಮಿನ ಕೋಟೆಯಲಿ, ಹತ್ತಿರವಿದ್ದೂ ದೂರ ನಿಲ್ಲುವವರ ಬಗ್ಗೆ ಏನೆನ್ನ ಬೇಕೋ ತೋಚುವುದಿಲ್ಲ. ದೂರದ ನೆಂಟರು ಎಂಬ ಮಾತಿದೆ, ಅವರು ದೂಶಿಸದಿರುವ ನೆಂಟರೋ ಅಥವಾ ದೂರದ ಸಂಬಂಧಿಗಳೋ? ನೆಂಟರು ಹತ್ತಿ ಮೇಲೇರದಿದ್ದರೆ ಸಾಕು! ಕೆಲವೊಮ್ಮೆ ಆಲೋಚನೆಗಳೂ ಸಹ ದೂರದ ಆಲೋಚನೆಗಳಾಗಿರುತ್ತವೆ. ಆದರೆ ಇಂತಹ ದೂರಾಲೋಚನೆಗಳು ದುರಾಲೋಚನೆಗಳಾಗದಂತೆ ಎಚ್ಚರವಹಿಸಬೇಕು ಅಷ್ಟೆ.ಹಾಗಾದರೆ ನಮ್ಮ ಬಳಿ instant ಆಗಿ ದೊರೆಯುವ ಆಲೋಚನೆಗಳಿಗೆ ಯಾವ ಮಾನ್ಯತೆಯೂ ಇಲ್ಲವೆಂದೇನೂ ಇಲ್ಲ, ಅವುಗಳೆಲ್ಲ ಇನ್ಸ್ಟಂಟ್ ಕಾಫಿಯಂತೆ ಇನ್ಸ್ಟಂಟ್ ಥಾಟ್ಸ್ ಗಳಾಗಿ [ Instant T ] ರೂಪತಾಳುತ್ತವೆ. ಇವನ್ನು ಹತ್ತಿರಾಲೋಚನೆ ಎನ್ನುವುದು ಎಷ್ಟು ಹಾಸ್ಯಾಸ್ಪದ!? ಪ್ರೇಮಕ್ಕೆ ಹಾಗು ಭಕ್ತಿಗೆ ಎಂತಹ ದೂರವನ್ನೂ ಹತ್ತಿರವಾಗಿಸುವ ಶಕ್ತಿಯಿದೆ. ರಾಧೆಗೆ ಕೃಷ್ಣ ಒಲಿದಂತೆ, ಪ್ರೇಮ ಹಾಗು ಭಕ್ತಿ ಬಾಳೆಹಣ್ಣು ಸುಲಿದಂತೆಯೆ? ಇದಕ್ಕೆ ತಪಸ್ಸು ಮುಖ್ಯ ಆದರೆ ಬಾಳೆಹಣ್ಣು ಸುಲಿಯಲು ತಪಸ್ಸಿನ ಅವಶ್ಯಕ್ಲತೆ ಬೇಡ! ಇಂಥಾ ಆಲೋಚನೆಗಳ ನಡುವೆ ದೂರವಿದ್ದರೂ ಯಾರನ್ನೂ ದೂರದೇ ಹತ್ತಿರವಿದ್ದರೂ ಅತೀ ಎನಿಸದೆ ಇರುವುದು ಒಳಿತು. ಏನಂತೀರಿ....??

Wednesday, April 27, 2011

ನಾವು ಹಾಗು ಬೇತಾಳ!


ನಾನು ಹಾಗು ಸುಬ್ಬ ಆ ಕರಿ ಇರುಳಿನಲಿ, ಮನೆ ಮುಂದಿನ ಈಚಲು ಮರದ ಬೇತಾಳ ಹಿಡಿಯಲು ಆಗಷ್ಟೇ ಹೊರಟಿದ್ದೆವು. ನನ್ನ ಬಳಿ ಇದ್ದಿದ್ದು ಬೆತ್ತದ ಬುಟ್ಟಿ ಹಾಗು ಸುಬ್ಬನ ಬಳಿ ಮಿಂಚುಗೋಲು!

ಬಾಲ್ಯದಲ್ಲಿ ಈಚಲು ಮರದ ಬಳಿ ನಾವು ಕಣ್ಣಾಮುಚ್ಚಾಲೆ ಆಡುವಾಗ ನಮ್ಮ ತಲೆಯ ಮೇಲೆ ಸೇಬಿನ ಹಣ್ಣನ್ನು ಉದುರಿಸುತ್ತಿದ್ದಿದ್ದು ಈ ಬೇತಾಳವೆ! ನಾವೆಲ್ಲಾ ಗೆಳೆಯರು ತಯಾರಿಸಿದ ಅಂಬುಜಾಕ್ಷಿ ಬಿಲ್ಲನ್ನು ಅದರ ತಲೆಗೆ ಗುರಿಯಿಟ್ಟು ಹೊಡೆದಾಗ, ಅದೆಲ್ಲೋ ಬೆರಳು ಜಾರಿ ಎದುರು ಮನೆಯ ಆಂಟೆನ್ನಾ ಗೆ ಅಂಟಿ ಆಂಟೆನ್ನಾ ಮುರಿದುಹೋಗಿ, ನಮ್ಮ ಬೀದಿಗಿದ್ದ ಒಂದೇ ಒಂದು ಟಿವಿ ಸಹ ನೋಡಲಾಗದೆ, ಆ ವಾರದ ಸಬೀನ, ಚಂದ್ರಕಾಂತ, ಗುಡ್ಡದ ಭೂತ ಧಾರವಾಹಿಗಳೆಲ್ಲ ನೆನೆಗುದಿಗೆ ಬಿದ್ದವು. ಬೇತಾಳವಿದ್ದ ಮರದಿಂದ ಆಗಾಗ "ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು..." ಎಂಬ ಭಾವಗೀತೆ ತೂಗಿ ಬರುತ್ತಿತ್ತು. ನಾವೆಲ್ಲಾ, ಬೇತಾಳ ಗಂಡೋ-ಹೆಣ್ಣೋ ಎಂಬ ತರ್ಕಕ್ಕೆ ಬೀಳುತ್ತಿದ್ದೆವು!

ನಾನು-ವೆಂಕ-ಸೀನ-ಸುಬ್ಬ ಪಣ ತೊಟ್ಟವರಂತೆ ಆ ಗುಡಿ ಗೋವಿಂದಪ್ಪನ ಜಗುಲಿಯಲ್ಲಿ ಕುಳಿತು ಬೇತಾಳ ಹಿಡಿಯುವ ಮಹಾ ಕೈಂಕರ್ಯಕ್ಕೆ ಯೋಜನೆ ಹಾಕಿದ್ದೆವು. ಬೇತಾಳ ಹಿಡಿಯುವ ಮುನ್ನ ಕಿವಿಗೆ ಸಿಗಿಸಿಕೊಳ್ಳಿ ಎಂದು ಫಟಿಂಗ ರುದ್ರಯ್ಯ ಮಂತ್ರಿಸಿ ಕೊಟ್ಟಿದ್ದ ನಿಂಬೆಹಣ್ಣು-ಮೆಣಸಿನಕಾಯಿಯನ್ನು ಸುಬ್ಬನ ಅಮ್ಮ ಉಪ್ಪಿನಕಾಯಿಗೆ ಹಾಕಿಬಿಟ್ಟಿದ್ದರು!
ಗೋವಿಂದಪ್ಪನ ಮಗಳು ಸದಾರಮೆ ಪಠ್ಯದಲ್ಲೇ ಮಗ್ನಳಾಗಿದ್ದರೆ ನಾವು ಪಠ್ಯೇತರದಲ್ಲಿ ತಲ್ಲೀನವಾಗಿದ್ದೆವು! ಊರ ಹಬ್ಬ ಹತ್ತಿರದಲ್ಲೇ ಇರುವಾಗ, ಬೇತಾಳ ಹಿಡಿದ ಸಾಹಸಿಗರ ಪಟ್ಟಿಯಲ್ಲಿ ನಮ್ಮ ಹೆಸರು-ಭಾವ ಚಿತ್ರವನ್ನು ಕಲ್ಪಿಸಿಕೊಂಡು ಖುಷಿಪಟ್ಟುಕೊಂಡೆವು. ಅಜ್ಜಿ,'ಬೀದಿಗೆ ಹೋದರೆ ಮನೆಯೇ ಸೇರುವುದಿಲ್ಲ' ಎಂದು ಹಿಡಿ ಶಾಪ ಹಾಕುತ್ತಾ ಇರುವಾಗ, ಇಂಗು ತಿಂದ ಮಂಗನಂತಿರುವ ನಮ್ಮ ಮುಖ ಕಂಡು ನನ್ನ ತಂಗಿಗೆ ಮುಸು ಮುಸು ನಗು. ಊರ ಜನರೆಲ್ಲಾ ತಂಬೂರಿ ಮಾದಯ್ಯನ ಹರಿಕಥೆ ಕೇಳಲು ನಾರಾಯಣ ದೇವರ ಗುಡಿ ಬಳಿ ಹೋಗಿರಲು, ನಾನು-ವೆಂಕ-ಸೀನ ಶೆಟ್ಟರ ಹೊಲದ ಹುಲ್ಲು ಮೆದೆಯಲ್ಲಿ ಅವಿತು, ಬೇತಾಳವನ್ನು ವಶೀಕರಿಸುವ ವಿದ್ಯೆಗೆ ಪ್ರಾವೀಣ್ಯತೆ ಪಡೆಯುತ್ತಿದ್ದೆವು. ಅಜ್ಜಿ, ರಾತ್ರಿಯೆಲ್ಲ ಬೇತಾಳದ ಕಥೆ ಹೇಳುತ್ತಿದ್ದರು. ಅದಾದರೂ ಅಷ್ಟೆ, ತಾನುಂಟು-ಮೂರು ಲೋಕವುಂಟು ಎಂಬಂತೆ ಇರುತ್ತಿತ್ತು. ನಮಗಾದರೂ ಅದನ್ನು ಹಿಡಿಯುವ ಹುಚ್ಚು ಅಪರಿಮಿತ ಆಸೆ. ಲೆಕ್ಕದ ತರಗತಿಯಲ್ಲಿ ಆ ಬೇತಾಳಕ್ಕೆ ವಯಸ್ಸೆಷ್ಟು ಎಂಬ ಲೆಕ್ಕ ಹಾಕುತ್ತಿದ್ದೆವು. ನನ್ನ ಮುಂದೆ ಕೂರುತ್ತಿದ್ದ ಜೋಯಿಸರ ಮಗಳ ಮಂಗಳ ಸ್ನಾನ ನನ್ನನ್ನೂ ಘಂ ಎನಿಸುತ್ತಿತ್ತು!

ವರುಷಗಳುರುಳಿದ ಮೇಲೆ ಮತ್ತೆ, ಇನ್ನೊಂದು ಸುತ್ತಿನ ವೀಳ್ಯ ಜಗಿದು ನಾನು-ಸುಬ್ಬು ಮತ್ತೆ ಬೇತಾಳದ ಬೇಟೆಗೆ ಹೊರಡುತ್ತೇವೆ. ವೆಂಕ ಮರದ ಕೆಳಗೆ ಕುಳಿತು ಕವಿತೆ ಹಾಡುತ್ತಾನೆ, ನಾವು ವಶೀಕರಿಸುತ್ತೇವೆ. ವೆಂಕನ ಕವಿತೆಗಳೇ ಹಾಗೆ...!!

ಊರ ಹಬ್ಬ ಬೇರೆ ಹತ್ತಿರ ಬರುತ್ತಿದೆ. ತೂಗು ಬತ್ತಿಯ ಬಣ್ಣದ ಭಿತ್ತಿಯಲಿ ನಮ್ಮ ಭಾವಚಿತ್ರದ ಬೆಳಕು! ನಮ್ಮ ಮುಖದಲಿ ನೂರು ಮಂದಸ್ಮಿತ ಹಾಗೆ ಚಳುಕ್ಕ್ ಎನ್ನುತ್ತದೆ!!

Friday, April 22, 2011

ಲೆಕ್ಕ ಕಲಿಯುತಿದೆ ವಯಸ್ಸು...


ಹೀಗೆ ಭುಜ ಕುಣಿಸಿ ಜಾರ ಬೇಕಿಲ್ಲ ಸೆರಗು,
ತೋಳ ತುದಿವರೆಗೂ ನಿಲುಕ ಬೇಕಿಲ್ಲ ರವಕೆ,
ಬೆರಳ ತುದಿಯ ಬೊಟ್ಟು ಹಣೆ ತನಕ ನಿಲುಕಿದ್ದು
ಈ ಹೆಣ್ತನವೆಂಬ ಹಂಬಲ,
ಮಂದಲೆಯ ಕುಂಕುಮ,ಮುಡಿಯೇರಿದ ಮಲ್ಲಿಗೆ
ಅದೊಂದೇ ಅಭ್ಯಾಸ ಬಲ,
ಕಣ್ಣಂಚು ಸರಿಸಬೇಕಲ್ಲ ಆ ಕಡು ಕಪ್ಪು ಕಾಡಿಗೆ,
ಕೆಂಪು ತುಟಿಯೊಂದೆ ಗುನುಗಿದ್ದು
ತನ್ನ ಹಾಡಿಗೆ ತನ್ನ ಪಾಡಿಗೆ,
ಅಮ್ಮ ಕೊಟ್ಟ ಸೀರೆ ಪಡಿಯಚ್ಚು,
ನಾನು ಅಮ್ಮನಂತೆ....
ನೆರಿಗೆ ನೂರು, ಬೆರಳ ನಡುವೆ ಮಡಚಿ
ಸಿಕ್ಕಿಸಿ ಹೊಕ್ಕಳ ತುದಿಗೆ ಕೊಂಚ ಜಾರಿಸಿ,
ಹೆರಳ ತುದಿಗೆ ಗಂಟು ಬಿಗಿದಾಗ,
ಹರಯ ಈಗಷ್ಟೇ ಕೈ ಕಟ್ಟಿ ಕೂರುತಿದೆ,
ಕೆನ್ನೆಯಲ್ಲರಳಿದ ಕೆಂಪ ಲೆಕ್ಕ ಕಲಿಯುತಿದೆ...

Sunday, August 1, 2010

ಮೊದಲನೇ ಸಾಲು!!


ಇದು ಕೊನೆಯ ಸಾಲು,
ಎಲ್ಲಾ ಅಲ್ಪವಿರಾಮಗಳು ಮುಗಿದು,
ಒಂದು ಚುಕ್ಕಿಯಲ್ಲಿ ಪೂರ್ಣವಿರಾಮ ಬಿಗಿದು,
ಅಂತ್ಯ ಹಾಡಿಬಿಡುವ ಮಂಗಳ ಕಾಲ,
ಬಿರಿದೆ ಬಿಡುವ ಬೀಗಮುದ್ರೆ,
ಮುನ್ನುಡಿ-ಹಿನ್ನುಡಿಯ ನಡುವೆ ಚಿರನಿದ್ರೆ!

ಪದಗಳ ಅವಶೇಷದಲ್ಲಿ ಯಾವ ಲೇಪವೋ,
ಕೋಶಗಳ ಒಳಗೆ ಏನು ಲೋಪವೋ,
ಅರಿಯಬೇಕಷ್ಟೇ ಹೂರಣ ಆದಿ-ಅಂತ್ಯದ ನಡುವೆ,
ಇರಬಹುದು ಒಂದು ನಿಕ್ಷೇಪ,
ಅಥವಾ ದೂರದಲ್ಲೇ ಉಳಿದುಹೋದ ದ್ವೀಪ!

ಈಗಷ್ಟೇ ಜೀವನ್ಮುಖಿ ಕವಿತೆ,
ಗರ್ಭದೊಳಗಿಂದ ಸೂತ್ರ ಹೊಸೆದ ಮೇಲೆ
ಇನ್ನಷ್ಟು ಪ್ರಖರ ಹಣತೆ!
ಮನಸ್ಸು ಅನ್ವೇಷಣೆಗೆ ಪರ್ಯಟನೆ,
ಇದೆಯೆ ಅಸ್ತಿತ್ವದ ಪ್ರಶ್ನೆಗೆ ಒಕ್ಕಣೆ,
ಇದೆ ಮೊದಲನೇ ಸಾಲು!!

Friday, July 9, 2010

ಕವಿತೆ ಹೊಳೆಯದ ರಾತ್ರಿ....

ಕವಿತೆ ಹೊಳೆಯದ ರಾತ್ರಿ,
ಮನಸ್ಸು ಉರಿದ ಬತ್ತಿ,
ಹರಿದ ಭಿತ್ತಿ....

ಕಣ್ಣು ನಿಗಿ ನಿಗಿ ಹಣತೆ,
ಚಂದಿರ ಪಡೆದ ಎರವಲು,
ಒಲೆಗೆ ತುಂಬಿದ ಉರುವಲು....

ಇನ್ನೆಷ್ಟು ಒಲವು,ಮುರಿದ ಮನಸ್ಸು,
ಸಣ್ಣ ದುಗುಡ, ಬಿಕ್ಕಿದ ಅಳು,
ಕವಿತೆಗೆ ಆಹುತಿ....

ಅಲ್ಲಿ ಚುಕ್ಕಿ ಹೊಳೆಯುತ್ತಾನೆ,
ಇರಲಿ ನೋವು ನಲಿವು ಎಲ್ಲಾ...
ನಾನು ನಕ್ಕಿ ಬೆಳೆಯುತ್ತೇನೆ...!!

Tuesday, July 6, 2010

ಸಂವೇದನೆ

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಸ್ಥಾವರದಲ್ಲಿ ಹುಟ್ಟಿ ಜಂಗಮದೆಡೆಗೆ ನಡೆದಾಗ
ಅಳಿಯದೇ ಉಳಿದುಹೋದ ಜೀವ!

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಜೀವ ಜನಿಸಿದಾಗಲೇ ಮರುಹುಟ್ಟು ಪಡೆದು
ಮರುಘಳಿಗೆ ಅರೆಜೀವವಾದ ಜೀವ!!

ನಾನೊಂದು ಹರಿವ ಝರಿಯ ಝುಳು,
ಸರಿದ ದಾರಿಯ ಕವಲು,
ಇಲ್ಲಿ ನನ್ನೊಳಗೆ ಎಳೆ ಬಿಸಿಲು ಕೊಂಕಿಸಿದಾಗ
ಸಂವೇದನೆಯ ನೆಪದಲಿ
ಹುಟ್ಟಿಕೊಂಡ ಕವಿತೆಯಷ್ಟೇ ನಾನು!!

Search This Blog