Wednesday, April 27, 2011

ನಾವು ಹಾಗು ಬೇತಾಳ!


ನಾನು ಹಾಗು ಸುಬ್ಬ ಆ ಕರಿ ಇರುಳಿನಲಿ, ಮನೆ ಮುಂದಿನ ಈಚಲು ಮರದ ಬೇತಾಳ ಹಿಡಿಯಲು ಆಗಷ್ಟೇ ಹೊರಟಿದ್ದೆವು. ನನ್ನ ಬಳಿ ಇದ್ದಿದ್ದು ಬೆತ್ತದ ಬುಟ್ಟಿ ಹಾಗು ಸುಬ್ಬನ ಬಳಿ ಮಿಂಚುಗೋಲು!

ಬಾಲ್ಯದಲ್ಲಿ ಈಚಲು ಮರದ ಬಳಿ ನಾವು ಕಣ್ಣಾಮುಚ್ಚಾಲೆ ಆಡುವಾಗ ನಮ್ಮ ತಲೆಯ ಮೇಲೆ ಸೇಬಿನ ಹಣ್ಣನ್ನು ಉದುರಿಸುತ್ತಿದ್ದಿದ್ದು ಈ ಬೇತಾಳವೆ! ನಾವೆಲ್ಲಾ ಗೆಳೆಯರು ತಯಾರಿಸಿದ ಅಂಬುಜಾಕ್ಷಿ ಬಿಲ್ಲನ್ನು ಅದರ ತಲೆಗೆ ಗುರಿಯಿಟ್ಟು ಹೊಡೆದಾಗ, ಅದೆಲ್ಲೋ ಬೆರಳು ಜಾರಿ ಎದುರು ಮನೆಯ ಆಂಟೆನ್ನಾ ಗೆ ಅಂಟಿ ಆಂಟೆನ್ನಾ ಮುರಿದುಹೋಗಿ, ನಮ್ಮ ಬೀದಿಗಿದ್ದ ಒಂದೇ ಒಂದು ಟಿವಿ ಸಹ ನೋಡಲಾಗದೆ, ಆ ವಾರದ ಸಬೀನ, ಚಂದ್ರಕಾಂತ, ಗುಡ್ಡದ ಭೂತ ಧಾರವಾಹಿಗಳೆಲ್ಲ ನೆನೆಗುದಿಗೆ ಬಿದ್ದವು. ಬೇತಾಳವಿದ್ದ ಮರದಿಂದ ಆಗಾಗ "ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು..." ಎಂಬ ಭಾವಗೀತೆ ತೂಗಿ ಬರುತ್ತಿತ್ತು. ನಾವೆಲ್ಲಾ, ಬೇತಾಳ ಗಂಡೋ-ಹೆಣ್ಣೋ ಎಂಬ ತರ್ಕಕ್ಕೆ ಬೀಳುತ್ತಿದ್ದೆವು!

ನಾನು-ವೆಂಕ-ಸೀನ-ಸುಬ್ಬ ಪಣ ತೊಟ್ಟವರಂತೆ ಆ ಗುಡಿ ಗೋವಿಂದಪ್ಪನ ಜಗುಲಿಯಲ್ಲಿ ಕುಳಿತು ಬೇತಾಳ ಹಿಡಿಯುವ ಮಹಾ ಕೈಂಕರ್ಯಕ್ಕೆ ಯೋಜನೆ ಹಾಕಿದ್ದೆವು. ಬೇತಾಳ ಹಿಡಿಯುವ ಮುನ್ನ ಕಿವಿಗೆ ಸಿಗಿಸಿಕೊಳ್ಳಿ ಎಂದು ಫಟಿಂಗ ರುದ್ರಯ್ಯ ಮಂತ್ರಿಸಿ ಕೊಟ್ಟಿದ್ದ ನಿಂಬೆಹಣ್ಣು-ಮೆಣಸಿನಕಾಯಿಯನ್ನು ಸುಬ್ಬನ ಅಮ್ಮ ಉಪ್ಪಿನಕಾಯಿಗೆ ಹಾಕಿಬಿಟ್ಟಿದ್ದರು!
ಗೋವಿಂದಪ್ಪನ ಮಗಳು ಸದಾರಮೆ ಪಠ್ಯದಲ್ಲೇ ಮಗ್ನಳಾಗಿದ್ದರೆ ನಾವು ಪಠ್ಯೇತರದಲ್ಲಿ ತಲ್ಲೀನವಾಗಿದ್ದೆವು! ಊರ ಹಬ್ಬ ಹತ್ತಿರದಲ್ಲೇ ಇರುವಾಗ, ಬೇತಾಳ ಹಿಡಿದ ಸಾಹಸಿಗರ ಪಟ್ಟಿಯಲ್ಲಿ ನಮ್ಮ ಹೆಸರು-ಭಾವ ಚಿತ್ರವನ್ನು ಕಲ್ಪಿಸಿಕೊಂಡು ಖುಷಿಪಟ್ಟುಕೊಂಡೆವು. ಅಜ್ಜಿ,'ಬೀದಿಗೆ ಹೋದರೆ ಮನೆಯೇ ಸೇರುವುದಿಲ್ಲ' ಎಂದು ಹಿಡಿ ಶಾಪ ಹಾಕುತ್ತಾ ಇರುವಾಗ, ಇಂಗು ತಿಂದ ಮಂಗನಂತಿರುವ ನಮ್ಮ ಮುಖ ಕಂಡು ನನ್ನ ತಂಗಿಗೆ ಮುಸು ಮುಸು ನಗು. ಊರ ಜನರೆಲ್ಲಾ ತಂಬೂರಿ ಮಾದಯ್ಯನ ಹರಿಕಥೆ ಕೇಳಲು ನಾರಾಯಣ ದೇವರ ಗುಡಿ ಬಳಿ ಹೋಗಿರಲು, ನಾನು-ವೆಂಕ-ಸೀನ ಶೆಟ್ಟರ ಹೊಲದ ಹುಲ್ಲು ಮೆದೆಯಲ್ಲಿ ಅವಿತು, ಬೇತಾಳವನ್ನು ವಶೀಕರಿಸುವ ವಿದ್ಯೆಗೆ ಪ್ರಾವೀಣ್ಯತೆ ಪಡೆಯುತ್ತಿದ್ದೆವು. ಅಜ್ಜಿ, ರಾತ್ರಿಯೆಲ್ಲ ಬೇತಾಳದ ಕಥೆ ಹೇಳುತ್ತಿದ್ದರು. ಅದಾದರೂ ಅಷ್ಟೆ, ತಾನುಂಟು-ಮೂರು ಲೋಕವುಂಟು ಎಂಬಂತೆ ಇರುತ್ತಿತ್ತು. ನಮಗಾದರೂ ಅದನ್ನು ಹಿಡಿಯುವ ಹುಚ್ಚು ಅಪರಿಮಿತ ಆಸೆ. ಲೆಕ್ಕದ ತರಗತಿಯಲ್ಲಿ ಆ ಬೇತಾಳಕ್ಕೆ ವಯಸ್ಸೆಷ್ಟು ಎಂಬ ಲೆಕ್ಕ ಹಾಕುತ್ತಿದ್ದೆವು. ನನ್ನ ಮುಂದೆ ಕೂರುತ್ತಿದ್ದ ಜೋಯಿಸರ ಮಗಳ ಮಂಗಳ ಸ್ನಾನ ನನ್ನನ್ನೂ ಘಂ ಎನಿಸುತ್ತಿತ್ತು!

ವರುಷಗಳುರುಳಿದ ಮೇಲೆ ಮತ್ತೆ, ಇನ್ನೊಂದು ಸುತ್ತಿನ ವೀಳ್ಯ ಜಗಿದು ನಾನು-ಸುಬ್ಬು ಮತ್ತೆ ಬೇತಾಳದ ಬೇಟೆಗೆ ಹೊರಡುತ್ತೇವೆ. ವೆಂಕ ಮರದ ಕೆಳಗೆ ಕುಳಿತು ಕವಿತೆ ಹಾಡುತ್ತಾನೆ, ನಾವು ವಶೀಕರಿಸುತ್ತೇವೆ. ವೆಂಕನ ಕವಿತೆಗಳೇ ಹಾಗೆ...!!

ಊರ ಹಬ್ಬ ಬೇರೆ ಹತ್ತಿರ ಬರುತ್ತಿದೆ. ತೂಗು ಬತ್ತಿಯ ಬಣ್ಣದ ಭಿತ್ತಿಯಲಿ ನಮ್ಮ ಭಾವಚಿತ್ರದ ಬೆಳಕು! ನಮ್ಮ ಮುಖದಲಿ ನೂರು ಮಂದಸ್ಮಿತ ಹಾಗೆ ಚಳುಕ್ಕ್ ಎನ್ನುತ್ತದೆ!!

Friday, April 22, 2011

ಲೆಕ್ಕ ಕಲಿಯುತಿದೆ ವಯಸ್ಸು...


ಹೀಗೆ ಭುಜ ಕುಣಿಸಿ ಜಾರ ಬೇಕಿಲ್ಲ ಸೆರಗು,
ತೋಳ ತುದಿವರೆಗೂ ನಿಲುಕ ಬೇಕಿಲ್ಲ ರವಕೆ,
ಬೆರಳ ತುದಿಯ ಬೊಟ್ಟು ಹಣೆ ತನಕ ನಿಲುಕಿದ್ದು
ಈ ಹೆಣ್ತನವೆಂಬ ಹಂಬಲ,
ಮಂದಲೆಯ ಕುಂಕುಮ,ಮುಡಿಯೇರಿದ ಮಲ್ಲಿಗೆ
ಅದೊಂದೇ ಅಭ್ಯಾಸ ಬಲ,
ಕಣ್ಣಂಚು ಸರಿಸಬೇಕಲ್ಲ ಆ ಕಡು ಕಪ್ಪು ಕಾಡಿಗೆ,
ಕೆಂಪು ತುಟಿಯೊಂದೆ ಗುನುಗಿದ್ದು
ತನ್ನ ಹಾಡಿಗೆ ತನ್ನ ಪಾಡಿಗೆ,
ಅಮ್ಮ ಕೊಟ್ಟ ಸೀರೆ ಪಡಿಯಚ್ಚು,
ನಾನು ಅಮ್ಮನಂತೆ....
ನೆರಿಗೆ ನೂರು, ಬೆರಳ ನಡುವೆ ಮಡಚಿ
ಸಿಕ್ಕಿಸಿ ಹೊಕ್ಕಳ ತುದಿಗೆ ಕೊಂಚ ಜಾರಿಸಿ,
ಹೆರಳ ತುದಿಗೆ ಗಂಟು ಬಿಗಿದಾಗ,
ಹರಯ ಈಗಷ್ಟೇ ಕೈ ಕಟ್ಟಿ ಕೂರುತಿದೆ,
ಕೆನ್ನೆಯಲ್ಲರಳಿದ ಕೆಂಪ ಲೆಕ್ಕ ಕಲಿಯುತಿದೆ...

Search This Blog