Sunday, August 1, 2010

ಮೊದಲನೇ ಸಾಲು!!


ಇದು ಕೊನೆಯ ಸಾಲು,
ಎಲ್ಲಾ ಅಲ್ಪವಿರಾಮಗಳು ಮುಗಿದು,
ಒಂದು ಚುಕ್ಕಿಯಲ್ಲಿ ಪೂರ್ಣವಿರಾಮ ಬಿಗಿದು,
ಅಂತ್ಯ ಹಾಡಿಬಿಡುವ ಮಂಗಳ ಕಾಲ,
ಬಿರಿದೆ ಬಿಡುವ ಬೀಗಮುದ್ರೆ,
ಮುನ್ನುಡಿ-ಹಿನ್ನುಡಿಯ ನಡುವೆ ಚಿರನಿದ್ರೆ!

ಪದಗಳ ಅವಶೇಷದಲ್ಲಿ ಯಾವ ಲೇಪವೋ,
ಕೋಶಗಳ ಒಳಗೆ ಏನು ಲೋಪವೋ,
ಅರಿಯಬೇಕಷ್ಟೇ ಹೂರಣ ಆದಿ-ಅಂತ್ಯದ ನಡುವೆ,
ಇರಬಹುದು ಒಂದು ನಿಕ್ಷೇಪ,
ಅಥವಾ ದೂರದಲ್ಲೇ ಉಳಿದುಹೋದ ದ್ವೀಪ!

ಈಗಷ್ಟೇ ಜೀವನ್ಮುಖಿ ಕವಿತೆ,
ಗರ್ಭದೊಳಗಿಂದ ಸೂತ್ರ ಹೊಸೆದ ಮೇಲೆ
ಇನ್ನಷ್ಟು ಪ್ರಖರ ಹಣತೆ!
ಮನಸ್ಸು ಅನ್ವೇಷಣೆಗೆ ಪರ್ಯಟನೆ,
ಇದೆಯೆ ಅಸ್ತಿತ್ವದ ಪ್ರಶ್ನೆಗೆ ಒಕ್ಕಣೆ,
ಇದೆ ಮೊದಲನೇ ಸಾಲು!!

Friday, July 9, 2010

ಕವಿತೆ ಹೊಳೆಯದ ರಾತ್ರಿ....

ಕವಿತೆ ಹೊಳೆಯದ ರಾತ್ರಿ,
ಮನಸ್ಸು ಉರಿದ ಬತ್ತಿ,
ಹರಿದ ಭಿತ್ತಿ....

ಕಣ್ಣು ನಿಗಿ ನಿಗಿ ಹಣತೆ,
ಚಂದಿರ ಪಡೆದ ಎರವಲು,
ಒಲೆಗೆ ತುಂಬಿದ ಉರುವಲು....

ಇನ್ನೆಷ್ಟು ಒಲವು,ಮುರಿದ ಮನಸ್ಸು,
ಸಣ್ಣ ದುಗುಡ, ಬಿಕ್ಕಿದ ಅಳು,
ಕವಿತೆಗೆ ಆಹುತಿ....

ಅಲ್ಲಿ ಚುಕ್ಕಿ ಹೊಳೆಯುತ್ತಾನೆ,
ಇರಲಿ ನೋವು ನಲಿವು ಎಲ್ಲಾ...
ನಾನು ನಕ್ಕಿ ಬೆಳೆಯುತ್ತೇನೆ...!!

Tuesday, July 6, 2010

ಸಂವೇದನೆ

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಸ್ಥಾವರದಲ್ಲಿ ಹುಟ್ಟಿ ಜಂಗಮದೆಡೆಗೆ ನಡೆದಾಗ
ಅಳಿಯದೇ ಉಳಿದುಹೋದ ಜೀವ!

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಜೀವ ಜನಿಸಿದಾಗಲೇ ಮರುಹುಟ್ಟು ಪಡೆದು
ಮರುಘಳಿಗೆ ಅರೆಜೀವವಾದ ಜೀವ!!

ನಾನೊಂದು ಹರಿವ ಝರಿಯ ಝುಳು,
ಸರಿದ ದಾರಿಯ ಕವಲು,
ಇಲ್ಲಿ ನನ್ನೊಳಗೆ ಎಳೆ ಬಿಸಿಲು ಕೊಂಕಿಸಿದಾಗ
ಸಂವೇದನೆಯ ನೆಪದಲಿ
ಹುಟ್ಟಿಕೊಂಡ ಕವಿತೆಯಷ್ಟೇ ನಾನು!!

Wednesday, June 23, 2010

ಕಾರಣ...!

ರಾತ್ರಿ ಕನಸಿನೊಳಗೆ ನೀ ಬಂದ ಸುಳಿವು,
ಕನಸಿನಲಿ ಒಲವು ನನಸಾದಂತೆ ನೆನವು,
ಮುಂಜಾನೆ ಕಣ್ಣುಜ್ಜಿದಾಗ
ದಿಂಬಿನ ಕಾಲಡಿ ಸಿಕ್ಕಿದ್ದು ನಿನ್ನ ಗೆಜ್ಜೆಯಷ್ಟೇ!

ನಿನ್ನ ನೆನಪು ನೆಪ ಮಾತ್ರ,
ಬೇಕಿರುವುದು ನೀನೆ ನೀನು!
ಇಲ್ಲಿ ಜೋರು ಮಳೆಯಾಗಿದೆ ಗೆಳತಿ,
ಮೆಲ್ಲನೆ ತಬ್ಬಿ ಹಿಡಿ ನೀ ನನ್ನ...!

ಒಲವೆಂಬುದು ಇಲ್ಲದಿದ್ದರೆ
ಆರಾಮಾಗೆ ಇದ್ದು ಬಿಡುತ್ತಿದ್ದೆನೇನೋ?
ಮಳೆ ಬಿದ್ದ ಮೇಲೆ ಮಣ್ಣಿನ ಘಮ
ಹಿಡಿಯುವುದಾದರೂ ಎಲ್ಲಿ?

ನಾನಿಲ್ಲಿ ನಿನ್ನ ಅಣತಿಗೆ
ಕಣ್ಣು ಮಿಟುಕಿಸಿ ಕಾದಿದ್ದೇನೆ ಹುಡುಗಿ,
ಆದರೂ ಅಲ್ಲೆಲ್ಲೋ ದೂರದ ತಾರೆ
ಮಿನುಗುವುದಾದರೂ ಏತಕೋ ಗೊತ್ತಿಲ್ಲ!!

Tuesday, April 20, 2010

ಕಾಲ!

ಸುಮ್ಮನೆ ನಡೆದು ನಡೆದು
ನನ್ನ ಗಡಿಯಾರದ ಕೈಗಳಿಗೆ
ಕಾಲು ನೋವು ಬಂದು,
ದಾರಿಯುದ್ದಕ್ಕೂ ಮೈಯ ಚಾಚಿ,
ಮಲಗಿದಂತೆ ಮಾಡಿ,
ಮಲಗದಂತೆ ನೋಡಿ,
ಒಂದು ಕನಸು ಕಾಣುವಲ್ಲಿ
ಕಾಯಕದ ತವಕ...!

ಎಂದೋ ಒಮ್ಮೆ
ನನ್ನದೆ ಸವೆದ ದಾರಿಯಲ್ಲಿ
ನಾನೇ ತಿರುಗಿ ತಿರುಗಿ,
ತಲೆಸುತ್ತು ಬಂದಂತೆ ನಟಿಸಿ,
ನನ್ನ ನಟನೆಗೆ ನಾನೇ ಜೀವತುಂಬುತ್ತಾ,
ಕಾಲದ ಹರಿವಿನಲ್ಲಿ,
ನನ್ನ ಅಸ್ತಿತ್ವದ ಇರುವಿನಲ್ಲಿ
ಸದಾ ಹರಿವ ಬಯಕೆ...

ಇಲ್ಲೆಲ್ಲೋ ಪ್ರಳಯದ ಮಾತಾಗಿದೆ,
ನನಗದು ಅಪ್ರಸ್ತುತ!
ನಿನ್ನೆಯ ಘಳಿಗೆ-ನೆನಪಿಗೆ ಸೀಮಿತ,
ನಾಳೆ,ಅಸೀಮಿತ,
ನಿನ್ನೆ-ನಾಳೆಯ ಮೀರಿ,
ಇಂದಿಗಷ್ಟೇ ಬಾಳುವ ಯತ್ನ,
ಮತ್ತೆ...
ಏರುಹೊಲೆಯ ದಾರಿ ದಾಟಲೇಬೇಕು,
ಕಾಲದೊಡನೆ ಕಾಲವಾಗಲೇಬೇಕು...!

Tuesday, March 9, 2010

ಮತ್ತೆ...!

ನೆನಪುಗಳ ಅಲೆಯಲ್ಲಿ
ಮರಳಿ ಬಾರದಿರು
ಮಣ್ಣುಗೂಡಿದ ಒಲವೆ,
ಬೆಂಕಿಗೂಡಿಗೆ ನೂಕದಿರು ಮತ್ತೆ,
ಮನದಗೂಡಿನ ಒಳಗೆ
ಮುರಿದ ತರಗೆಲೆಯ ನನ್ನೆದೆಗೆ,
ಪ್ರೇಮತಂಗಾಳಿ ತಾಕದಿರು ಮತ್ತೆ!

ಕಣ್ಣ ರೆಪ್ಪೆಯ ಒಳಗೆ
ಬಚ್ಚಿಟ್ಟ ಭಗ್ನ ಕನಸುಗಳು,
ಕರಗಿ ಕೆನ್ನೆಯಲಿ ಜಾರುತಿಹುದು,
ಸುಪ್ತ ಬಯಕೆಗಳು
ಅವಿಶ್ರಾಂತ ಕೊಠಡಿಯಲಿ,
ಹಾಡದೆ, ಬಾಡದೆ, ಕಾಡುತಿಹುದು!

ಮರಳಿ ಬಾರದಿರು
ಮಣ್ಣುಗೂಡಿದ ಒಲವೆ
ನೆನಪುಗಳ ಅಲೆಯಲ್ಲಿ ಮತ್ತೆ,
ಒಡಲಾಗ್ನಿಯ ಭುಗಿಲೊಳಗೆ
ತೆರಳಿಹೋಗುವೆ ನಾನು,
ಜ್ವಲಿಸಿಹೋಗಲೇನು ಮತ್ತೆ-ಮತ್ತೆ...?!

Sunday, February 7, 2010

ನನ್ನ ಪ್ರೀತಿ...

ಮಾತು-ಮಳೆ,
ಮೌನ-ಶೃಂಗಾರ!
ಮೌನ ಒಂದು ಒಪ್ಪಿಗೆ,
ಕೆನ್ನೆಯ ಕೆಂಪಿನ ಅಪ್ಪುಗೆ!

ನಿನ್ನೆಯ ಸಣ್ಣ ಮುನಿಸು,
ನಾಳೆಗೆ ಬರಿ ನೆನಪು!
ನಿನ್ನೆ-ನಾಳೆಯ ನಡುವೆ
ನನ್ನದು-ಪ್ರೀತಿ,ಪ್ರೀತಿ,ಪ್ರೀತಿ...!

ಮೆಲ್ಲಗೆ ಪಿಸುಗುಡಲೇ
ನಿನ್ನ ಕಿವಿಯೊಳಗೆ?
ಉಸಿರ ಹೆಸರಿನ ನನ್ನ ಮಾತು,
ಪ್ರೀತಿ,ಪ್ರೀತಿ,ಪ್ರೀತಿ...!

ನನ್ನ ಮೌನ-ಹೆಬ್ಬಯಕೆ!
ನಿನ್ನ ಮಾತು-ರಸಕಾವ್ಯ!
ಇದು ಆಡಂಬರವಲ್ಲ,
ನಿತ್ಯ ಕೈಂಕರ್ಯ,
ನನ್ನ ಪ್ರೀತಿ...!!

Search This Blog