
ನಿದಿರೆಯಿಂದ ಎದ್ದು ಕನಸಿನಲಿ
ನಿನ್ನ ಕಿರುಬೆರಳ ಹಿಡಿದು ಕಡಲ ದಂಡೆಯಲಿ
ತುಸು ದೂರ ನಿನ್ನೊಡನೆ ನಡೆಯಬೇಕು,
ಅಲೆಗಳು ನಿನ್ನ ಗೆಜ್ಜೆಕಾಲುಗಳ ಚುಂಬಿಸಿ
ನಿನ್ನ ಹೆಜ್ಜೆಯಲಿ ನನ್ನ ಕಾವ್ಯವ ಬಿಂಬಿಸಿ,
ನಿನ್ನೊಡನೆ ಮೆಲ್ಲನೆ ಬರಲು,
ಕಿರುಗೆನ್ನೆಯಲಿ ನಗಬೇಕು ಕಡಲು!
ಕಡಲ ಒಡಲೊಳಗೆ ಜಾರಿಬಿಡಲು ಹಗಲು,
ಇರುಳು ಮತ್ತೆ ಹಗಲುವೇಷ ಧರಿಸಿ
ಚಂದಿರನನ್ನು, ಚುಕ್ಕಿಗಳನ್ನು
ಕಡಲೊಳಗೆ ಇರಿಸಿಬಿಡಲು,
ನಿನಗಾಗಿ ಚುಕ್ಕಿಗಳ ಹೆಕ್ಕಿತರಲು
ಕದಲಾಳದಲಿ ಇಳಿದುಬಿಡಬೇಕು!
ನಿನ್ನ ಕಣ್ಣಿನಾಳದಲ್ಲೊಂದು ಪುಟ್ಟ ಕಡಲಿದೆ,
ಆ ಕಡಲಿಗೆ ಬೇರೆ ಯಾವುದೋ ಹೆಸರು!
ಕಡಲ ದಂಡೆಯಿಂದ, ಮರಳ ಬಂಡೆಯಿಂದ
ನಿನ್ನ ಕೂಗಿ ಕರೆದು,
ಬಿಸಿಲು ಕುದುರೆಯ ಎಳೆದು ತಂದು
ನಿನ್ನೊಡನೆ ಬಂದು ಬಿಡಬೇಕು!
ಕಡಲ ತಡಿಯ ಮುತ್ತುಗಳಂತೆ
ನಿನ್ನ ತುಟಿಯಲ್ಲಿ ನನ್ನ ಹಾಲುಗೆನ್ನೆಯ ಚೆಲ್ಲಿ
ನನ್ನಲ್ಲೀಗ ಸೂರ್ಯೋದಯ!!
ನನ್ನ ಬಳಿ ಕಡಲ ಅಲೆಯ ಸೆಳೆತ!