Wednesday, June 23, 2010

ಕಾರಣ...!

ರಾತ್ರಿ ಕನಸಿನೊಳಗೆ ನೀ ಬಂದ ಸುಳಿವು,
ಕನಸಿನಲಿ ಒಲವು ನನಸಾದಂತೆ ನೆನವು,
ಮುಂಜಾನೆ ಕಣ್ಣುಜ್ಜಿದಾಗ
ದಿಂಬಿನ ಕಾಲಡಿ ಸಿಕ್ಕಿದ್ದು ನಿನ್ನ ಗೆಜ್ಜೆಯಷ್ಟೇ!

ನಿನ್ನ ನೆನಪು ನೆಪ ಮಾತ್ರ,
ಬೇಕಿರುವುದು ನೀನೆ ನೀನು!
ಇಲ್ಲಿ ಜೋರು ಮಳೆಯಾಗಿದೆ ಗೆಳತಿ,
ಮೆಲ್ಲನೆ ತಬ್ಬಿ ಹಿಡಿ ನೀ ನನ್ನ...!

ಒಲವೆಂಬುದು ಇಲ್ಲದಿದ್ದರೆ
ಆರಾಮಾಗೆ ಇದ್ದು ಬಿಡುತ್ತಿದ್ದೆನೇನೋ?
ಮಳೆ ಬಿದ್ದ ಮೇಲೆ ಮಣ್ಣಿನ ಘಮ
ಹಿಡಿಯುವುದಾದರೂ ಎಲ್ಲಿ?

ನಾನಿಲ್ಲಿ ನಿನ್ನ ಅಣತಿಗೆ
ಕಣ್ಣು ಮಿಟುಕಿಸಿ ಕಾದಿದ್ದೇನೆ ಹುಡುಗಿ,
ಆದರೂ ಅಲ್ಲೆಲ್ಲೋ ದೂರದ ತಾರೆ
ಮಿನುಗುವುದಾದರೂ ಏತಕೋ ಗೊತ್ತಿಲ್ಲ!!

Tuesday, April 20, 2010

ಕಾಲ!

ಸುಮ್ಮನೆ ನಡೆದು ನಡೆದು
ನನ್ನ ಗಡಿಯಾರದ ಕೈಗಳಿಗೆ
ಕಾಲು ನೋವು ಬಂದು,
ದಾರಿಯುದ್ದಕ್ಕೂ ಮೈಯ ಚಾಚಿ,
ಮಲಗಿದಂತೆ ಮಾಡಿ,
ಮಲಗದಂತೆ ನೋಡಿ,
ಒಂದು ಕನಸು ಕಾಣುವಲ್ಲಿ
ಕಾಯಕದ ತವಕ...!

ಎಂದೋ ಒಮ್ಮೆ
ನನ್ನದೆ ಸವೆದ ದಾರಿಯಲ್ಲಿ
ನಾನೇ ತಿರುಗಿ ತಿರುಗಿ,
ತಲೆಸುತ್ತು ಬಂದಂತೆ ನಟಿಸಿ,
ನನ್ನ ನಟನೆಗೆ ನಾನೇ ಜೀವತುಂಬುತ್ತಾ,
ಕಾಲದ ಹರಿವಿನಲ್ಲಿ,
ನನ್ನ ಅಸ್ತಿತ್ವದ ಇರುವಿನಲ್ಲಿ
ಸದಾ ಹರಿವ ಬಯಕೆ...

ಇಲ್ಲೆಲ್ಲೋ ಪ್ರಳಯದ ಮಾತಾಗಿದೆ,
ನನಗದು ಅಪ್ರಸ್ತುತ!
ನಿನ್ನೆಯ ಘಳಿಗೆ-ನೆನಪಿಗೆ ಸೀಮಿತ,
ನಾಳೆ,ಅಸೀಮಿತ,
ನಿನ್ನೆ-ನಾಳೆಯ ಮೀರಿ,
ಇಂದಿಗಷ್ಟೇ ಬಾಳುವ ಯತ್ನ,
ಮತ್ತೆ...
ಏರುಹೊಲೆಯ ದಾರಿ ದಾಟಲೇಬೇಕು,
ಕಾಲದೊಡನೆ ಕಾಲವಾಗಲೇಬೇಕು...!

Tuesday, March 9, 2010

ಮತ್ತೆ...!

ನೆನಪುಗಳ ಅಲೆಯಲ್ಲಿ
ಮರಳಿ ಬಾರದಿರು
ಮಣ್ಣುಗೂಡಿದ ಒಲವೆ,
ಬೆಂಕಿಗೂಡಿಗೆ ನೂಕದಿರು ಮತ್ತೆ,
ಮನದಗೂಡಿನ ಒಳಗೆ
ಮುರಿದ ತರಗೆಲೆಯ ನನ್ನೆದೆಗೆ,
ಪ್ರೇಮತಂಗಾಳಿ ತಾಕದಿರು ಮತ್ತೆ!

ಕಣ್ಣ ರೆಪ್ಪೆಯ ಒಳಗೆ
ಬಚ್ಚಿಟ್ಟ ಭಗ್ನ ಕನಸುಗಳು,
ಕರಗಿ ಕೆನ್ನೆಯಲಿ ಜಾರುತಿಹುದು,
ಸುಪ್ತ ಬಯಕೆಗಳು
ಅವಿಶ್ರಾಂತ ಕೊಠಡಿಯಲಿ,
ಹಾಡದೆ, ಬಾಡದೆ, ಕಾಡುತಿಹುದು!

ಮರಳಿ ಬಾರದಿರು
ಮಣ್ಣುಗೂಡಿದ ಒಲವೆ
ನೆನಪುಗಳ ಅಲೆಯಲ್ಲಿ ಮತ್ತೆ,
ಒಡಲಾಗ್ನಿಯ ಭುಗಿಲೊಳಗೆ
ತೆರಳಿಹೋಗುವೆ ನಾನು,
ಜ್ವಲಿಸಿಹೋಗಲೇನು ಮತ್ತೆ-ಮತ್ತೆ...?!

Sunday, February 7, 2010

ನನ್ನ ಪ್ರೀತಿ...

ಮಾತು-ಮಳೆ,
ಮೌನ-ಶೃಂಗಾರ!
ಮೌನ ಒಂದು ಒಪ್ಪಿಗೆ,
ಕೆನ್ನೆಯ ಕೆಂಪಿನ ಅಪ್ಪುಗೆ!

ನಿನ್ನೆಯ ಸಣ್ಣ ಮುನಿಸು,
ನಾಳೆಗೆ ಬರಿ ನೆನಪು!
ನಿನ್ನೆ-ನಾಳೆಯ ನಡುವೆ
ನನ್ನದು-ಪ್ರೀತಿ,ಪ್ರೀತಿ,ಪ್ರೀತಿ...!

ಮೆಲ್ಲಗೆ ಪಿಸುಗುಡಲೇ
ನಿನ್ನ ಕಿವಿಯೊಳಗೆ?
ಉಸಿರ ಹೆಸರಿನ ನನ್ನ ಮಾತು,
ಪ್ರೀತಿ,ಪ್ರೀತಿ,ಪ್ರೀತಿ...!

ನನ್ನ ಮೌನ-ಹೆಬ್ಬಯಕೆ!
ನಿನ್ನ ಮಾತು-ರಸಕಾವ್ಯ!
ಇದು ಆಡಂಬರವಲ್ಲ,
ನಿತ್ಯ ಕೈಂಕರ್ಯ,
ನನ್ನ ಪ್ರೀತಿ...!!

Monday, December 28, 2009

ನಾನು-ಕವಿತೆ!

ನಾನು ಕವಿತೆ,
ಕವಿತೆ ಹಿತ್ತಲ ಗಿಡ,
ಹಿತ್ತಲ ಗಿಡ ಮದ್ದಲ್ಲ!

ಯಾರೋ ಮೈಮರೆತು ಬೀಳಿಸಿದ ಮಡಿಕೆಯ
ಚೂರಾದ ಕವಿತೆ ನಾನು,
ಹಿಂತಿರುಗದ ಬಾಣ
ಖಾಲಿಯಾದ ಬತ್ತಳಿಕೆ!

ಕಾಣದ ತೀರದ
ಆಸೆಯ ಅಲೆಯ ಬಲೆಗೆ
ಸಿಲುಕಿ ಸೋತುಹೋದ ಕವಿತೆ ನಾನು!

ನಿರ್ಜೀವ ಬಯಕೆಗಳ
ಬಯಸುವ ಮನಕೆ
ದುಃಖದ ಮೂಲ ಹುಡುಕುವ ಕವಿತೆ ನಾನು!

ವ್ಯಾಪ್ತಿ ಮೀರಿ,
ವ್ಯಾಸವನ್ನೇ ಸೇರಿ,
ದಾಟಿಹೋಗುವ ನಿರ್ಲಿಪ್ತ ಮುಕ್ತ ಕವಿತೆ ನಾನು!

Monday, December 14, 2009

ಒಂದಷ್ಟು ಹನಿಗಳು...

ಮನಸ್ಸಿನ ತಿಳಿಹಾಳೆಯಲ್ಲಿ
ನಿನ್ನ ಒಲವಿನ ಎಳೆಯನ್ನು
ಎಳೆದು ಬಿಡಿಸಿದ ಶುಭ್ರ ರಂಗವಲ್ಲಿ.

ನನ್ನ ಕಣ್ಣಿನೊಳಗೆ ಈ ಮೌನ ಸೂರ್ಯ
ಮುಳುಗಿಹೊಗುತ್ತಾನೆ,
ನಮ್ಮಿಬ್ಬರ ನಡುವೆ ಬೆಳದಿಂಗಳು
ಬಲೆಯಾಗಿ ಹಬ್ಬುವ ಸಮಯ.

ನನ್ನೆದೆಯ ಪುರವಾಣಿಯಲ್ಲಿ
ನಿನ್ನ ಒಲವ ಗೀತೆ ಪ್ರಕಟ,
ಹಾಡಿಹೋದ ಸ್ವರಗಳಲ್ಲಿ
ನೀನು ಮಾತ್ರ ನಿಕಟ!

ನನ್ನ ನೋಟ ನಿನ್ನ ಕಣ್ಣಿನೊಳಗೆ
ಇಳಿದು ಹೋಗುತ್ತದೆ,
ಏನು ಮಾಡಲಿ,
ಮನಸ್ಸು ನಿನ್ನೊಳಗೆ
ಕಳೆದು ಹೋಗುತ್ತದೆ.

ನಾನು ಪ್ರತಿಬಾರಿಯೂ ಮುಗುಳ್ನಕ್ಕು
ನಿನ್ನ ಉತ್ತರಕ್ಕಾಗಿ ಕಾಯುವ ಹುಡುಗಿ,
ಹೋಗಿಬಿಡುವೆ ನಿನ್ನೊಳಗೆ ಕರಗಿ,
ಗೆಳೆಯ, ಬೇಡ ಬಿಡು ನನ್ನ ಹುಡುಕುವ ವಿಫಲಯತ್ನ!

Friday, November 27, 2009

ಭ್ರಮೆ

ಮನಸಿನೊಳಗೆ ಸುರಿದ ನಿನ್ನ ಮೌನ...
ಮೌನಕೆ ಮಾತಿಲ್ಲ-ಕಥೆಯಿಲ್ಲ,
ಹಾಡು-ಹಸೆಯ ಹಂಗಿಲ್ಲ,
ನಿನ್ನ ನೆನಪು ಎದೆಯ ಗಾಳಕ್ಕೆ ಸಿಲುಕಿ
ಕಲಕಿದಂತೆ ಅಂತರಾಳದ ಕಡಲು,
ಹಾಡೆಲ್ಲ ಮೂಕವಾಗಿ,
ಹಾಡೊಳಗೆ ಶೋಕದ ಸಾಲು....!

ನನ್ನೊಳಗೆ ಉಳಿದುಹೋದ ನಿನ್ನ ನೆನಪು...
ನೆನಪಿಗೆ ಒನಪಿಲ್ಲ-ಒಯ್ಯಾರವಿಲ್ಲ!
ದುಃಖ-ದುಮ್ಮಾನದ ಅರಿವಿಲ್ಲ,
ನಿನ್ನ ಹೆಸರು ಕೂಗಿ ಕರೆಯುವಂತೆ
ಮೌನ ಶಿಖರದೊಳಗೆ,
ಏನು ಹೆಸರು ನಿನ್ನ
ಕೇಳಿಯೂ ಕೇಳದ ಪರಿಗೆ?
ಮನಸು ದುಃಖದ ಸುಳಿಗೆ...!

ನೀನು ಬರೆಯಲಾಗದ ಕವಿತೆ,
ಉರಿಯದ ಒಲವಿನ ಹಣತೆ,
ನನ್ನೊಳಗೆ ಸುಮ್ಮನೆ ಪರಿತಪನೆ!
ದೂರದ ಊರಿಗೆ ಏಕಾಂತ ನಡಿಗೆ
ಚೆಲ್ಲಿದೆ ನನ್ನೊಳಗೆ
ನಿನ್ನ ನೆನಪಿನ ನೆರಳು....!

Search This Blog