ಹೀಗೆ ಮನೆಗಳ ಮುಂದಿರುವ, 'ನಾಯಿಗಳಿವೆ ಎಚ್ಚರಿಕೆ' ಅನ್ನುವ ಬೋರ್ಡುಗಳು ಹಾಸ್ಯಾಸ್ಪದವಾಗಿ ತೋರುತ್ತಿದೆ. ಬಹುಷಃ ಕಾಡುಗಳಲ್ಲೂ 'ಸಿಂಹಗಳಿವೆ ಎಚ್ಚರಿಕೆ..' ಅಥವಾ ' ಹುಲಿಗಳಿವೆ ಎಚ್ಚರಿಕೆ' ಎಂಬ ಬೋರ್ಡುಗಳು ಕಾಣಲಾರಿರೆನೋ. ಅಥವಾ ಸಿಂಹಗಳು ಕಾಡುಗಳಲ್ಲಿ ಕಾಣಸಿಗುತ್ತದೋ-ಇಲ್ಲವೋ ಅದು ಬೇರೆಯೇ ತೆರನಾದ ಪ್ರೆಶ್ನೆ. ಕೆಲವೊಂದು ಸ್ಥಳಗಳಲ್ಲಿ, 'ಕೋತಿಗಳಿವೆ ಎಚ್ಚರಿಕೆ' ಎಂಬ ಬೋರ್ಡುಗಳನ್ನು ಲಗತ್ತಿಸಿರುವುದನ್ನು ನೋಡಿದ್ದೇನೆ. ಅಸಲಿಗೆ ಮನೆಯಲ್ಲಿ ಮನುಷ್ಯರಿದ್ದಾರೋ ಇಲ್ಲವೋ ಎಂಬ ಸಂದೇಹ ಉಳಿದು ಬಿಡಬಹುದು. ಬೋರ್ಡನ್ನು ನೋಡಿ ಭೀತಿಯಿಂದ ಮನೆಯಲ್ಲಿರುವವರ ಹೆಸರನ್ನು ಗೇಟಿನಿಂದಾಚೆಯೇ ನಿಂತು ಕೂಗಿದರೆ, ನಾಯಿಯಷ್ಟೇ ಬೊಗಳಬಹುದು. ಆದರೂ ನಾವು 'ನಾಯಿ ಬೊಗಳಿದರೆ ದೇವ ಲೋಕ ಹಾಳಾಗದು' ಎಂದು ಕಣ್ನ್ ಮುಚ್ಚಿ ಒಳ ನಡೆಯುವಂತಿಲ್ಲ, ಅವುಗಳ ಬೊಗಳುವಿಕೆಯನ್ನು ಅಲಕ್ಷಿಸುವಂತಿಲ್ಲ. ನಾಯಿ, ಟಾಮಿಯೋ, ಜಿಮ್ಮಿಯೋ ಆಗಿದ್ದರೆ ಪರವಾಗಿಲ್ಲ. ನಾಯಿಯ ಹೆಸರೇ ಟೈಗರ್ ಎಂಬುದಾಗಿದ್ದರೆ ನಾವು ತುಂಬಾ ಜಾಗರೂಕರಾಗಿರಬೇಕು.
ಹಾಗೆ ನೋಡಿದರೆ, ಈ 'ನಾಯಿಯಿದೆ ಎಚ್ಚರಿಕೆ' ಅಥವಾ ಶ್ರೀಮಂತರ ಮನೆಯಾಗಿದ್ದರೆ, 'ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡು ಗಳಲ್ಲಿ ಸಂಪೂರ್ಣ ಮಾಹಿತಿಗಳೇ ಇರುವುದಿಲ್ಲ. ಮನೆಯ ಒಳಗಿರುವ ನಾಯಿ, ಗಂಡು ನಾಯಿಯೋ ಅಥವಾ ಹೆಣ್ಣು ನಾಯಿಯೋ, ಇಲ್ಲವೇ ಬೊಗಳುವ ನಾಯಿಯೋ ಅಥವಾ ಕಚ್ಚುವ ನಾಯಿಯೋ ಎಂಬ ಯಾವುದೇ ಮಾಹಿತಿಗಳು ಲಭ್ಯವಿರುವುದಿಲ್ಲ. ಇಲ್ಲವಾದಲ್ಲಿ at least ಆ ನಾಯಿಯ ಹೆಸರಾದರೂ ಆ ಬೋರ್ಡಿನೊಂದಿಗೆ ಮಾಹಿತಿಯಿದ್ದರೆ ಸೂಕ್ತ. ಏಕೆಂದರೆ ಯಾರಾದರೂ ಮನೆಗೆ ಬಂದರೆ, ಮೊದಲು ಆ ನಾಯಿಯ ಹೆಸರನ್ನೇ ಕೂಗಿ ಕರೆದು ನಮ್ಮ ಪರಿಚಯವನ್ನಾದರೂ ವಿನಿಮಯ ಮಾಡಿಕೊಳ್ಳಬಹುದು. ಹೇಗಿದ್ದರೂ Dog is Man's best friend ಅಲ್ಲವ? ಅತಿಥಿಗಳು ಮನೆಗೆ ಬರುವಾಗ ಮನೆಯವರಿಗೆಂದು ತರುವ ತಿಂಡಿ ಪದಾರ್ಥಗಳೊಡನೆ ನಾಯಿಗೆಂದೇ ಪ್ರತ್ಯೇಕವಾದ ನಾಯಿಯ ಬಿಸ್ಕಟ್ಟುಗಳನ್ನು ಸಹ ತರಲು ಅನುಕೂಲವಾಗಬಹುದು.
ಇತ್ತೀಚಿಗೆ ಪರಿಚಿತರೊಬ್ಬರ ಮನೆಗೆ ಹೋಗಿದ್ದಾಗ, ಅವರ ಮನೆಯಲಿದ್ದ ನಾಯಿಯನ್ನು ನೋಡಿ, ' ಏನ್ ಹಾಕ್ತೀರಾ ನಿಮ್ಮ ಮನೆ ನಾಯಿಗೆ, ಗುಂಡು ಗುಂಡಾಗಿದೆ..' ಎಂದೆ. ಅದಕ್ಕವರು, ' ನೀವು ಅದನ್ನ "ನಾಯಿ" ಅನ್ನ್ಬೇಡಿ, ಅದ್ರ ಹೆಸರು "ಜಿಮ್ಮಿ" ಎಂದರು! ಅದೇನು ಅವರ ವಿವರಣೆಯೂ, ವಿಶ್ಲೇಷಣೆಯೋ ತಿಳಿಯಲಿಲ್ಲ. ಈಗೆಲ್ಲ, 'ಹಚಾ..ನಾಯಿ..' ಎನ್ನುವಂತಿಲ್ಲ. ಆದ ಕಾರಣವೋ ಏನೋ, ಆ ಕಂಪನಿಯ ಹೆಸರೇ 'ಹಚ್ಹ್ಹ್' ಎಂದಾಗಿ ಬಿಟ್ಟಿತು. ಈಗೀಗ ನಾಯಿಗೆಂದು ಪ್ರತೆಯೇಕವಾದ ಹೇರ್ ಸ್ಟೈಲ್ ಗಳು ಬಂದಿರುವುದರಿಂದ, ನಾಯಿಗಳಿಗೆಂದೇ ಹೇರ್ ಸ್ಪಾ ಗಳು ಬಂದರೆ ನಾಯಿಗಳೆಲ್ಲಾ ಸಾಲುಗಟ್ಟಿ ನಿಂತೀತು! ಇತ್ತೀಚಿಗೆ ಗೆಳತಿಯೊಡನೆ ಮಾತನಾಡುತ್ತಾ ನನ್ನ ಮಾತಿಗಿಂತ ಎದುರು ಮನೆಯ ನಾಯಿ ಬೊಗಳಿದ್ದೆ ಹೆಚ್ಚು ಕೇಳಿಸಿ, "ಮೊದ್ಲು ಆ ನಾಯಿಯನ್ನು ಓಡಿಸಿ ನಂತರ ಫೋನ್ ಮಾಡು..." ಎಂದದ್ದು ಮಾತ್ರ ಯಾವ 'ನಾಯ' [ ಅನ್ಯಾಯ!]
ಆದರೂ ಬೀದಿಗೊಂದಾದರೂ ನಾಯಿರಬೇಕು. ಇಲ್ಲವಾದಲ್ಲಿ ಮನೆಯ ತಂಗಳ ವಿಲೇವಾರಿಗೆ ತಲೆನೋವಾಗಬಹುದು, ಮನೆಯ ಕಾರಿನ ಟೈರುಗಳಿಗೆ ಜಲಾಭಿಷೇಕ ಆಗದೆ ಬೇಸರಿಸಿಕೊಳ್ಳಬಹುದು. ಬೆಂಗಳೂರಿನಂತ ಬೆಂಗಳೂರಿನಲ್ಲಿ ಮನೆಗೆ ಮನೆಗಳೇ ಆಫೀಸಿನಲ್ಲಿ ಕೂತಿರುವಾಗ ಬೀದಿಗೆ ಒಂಟಿತನ ಕಾಡಬಾರದಂತೆ ನೋಡಿಕೊಳ್ಳುವುದೇ ನಾಯಿಗಳು. ನನ್ನಂತ ಯುವ ಪ್ರೇಮಿಯೊಬ್ಬ ಕೈ ಕೈ ಹಿಡಿದು ನಡೆವಾಗ ದೂರದಲೆಲ್ಲೋ ನಾಯಿ ಬೊಗಳಿದರೆ ಇವಳು ಇನ್ನಷ್ಟು ಅಪ್ಪಿ ನಡೆಯುವ ಸಣ್ಣ ಖುಷಿಗಾದರೂ ಬೀದಿಗೊಂದು ನಾಯಿರಲಿ, ಮನೆಗೊಂದೇ ಮಗುವಿರಲಿ....!!